ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ದಿ ಶ್ರೀ ವಿರುಪಾಕ್ಷಪ್ಪ ಮತ್ತು ನೀಲಮ್ಮ ಅಂಗಡಿ ಇವರ ಪುಣ್ಯ ಗರ್ಭದಲ್ಲಿ ಗುರೂಜಿಯವರು ಜನಿಸಿದರು .ಬಾಲ್ಯಾವಸ್ಥೆಯಿಂದಲೂ ದೇಶಕ್ಕಾಗಿ ಯಾವುದಾದರೂ ರೀತಿಯಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳ ಬೇಕೆಂಬುದು ಅವರ ಬಯಕೆಯಾಗಿತ್ತು.
ಮಾನವ ಗುರು ಅವರು ಬಾಲ್ಯದಲ್ಲಿದ್ದಾಗ ಅವರು ವಾಸಿಸುವ ಬಡಾವಣೆಯಲ್ಲಿ ಒಂದು ದೇವಸ್ಥಾನವಿತ್ತು. ಆ ದೇವಾಲಯದ ನಿರ್ವಹಣೆ ಮಾಡಲು ಆ ಬಡಾವಣೆಯ ಎಲ್ಲಾ ಮನೆಗಳಿಂದ ಹಣವನ್ನು ಸಂಗ್ರಹಿಸಬೇಕಾಗಿತ್ತು. ಗುರೂಜಿಯವರು ವಾಸವಾಗಿದ್ದ ಆ ಬಡಾವಣೆಯಲ್ಲಿ ಸುಮಾರು 50 ರಿಂದ 60 ಮನೆಗಳಿದ್ದವು. ಆ ನಗರದ ಯಾವ ವ್ಯಕ್ತಿಯು ಕೂಡ ಮುಂದೆ ಬಂದು ದೇವಸ್ಥಾನದ ನಿರ್ವಹಣೆಗೆ ಹಣ ಸಂಗ್ರಹಿಸಲು ಸಿದ್ದರಿರಲಿಲ್ಲ. ಆಗ ಗುರೂಜಿಯವರು ಮುಂದೆ ಬಂದು ತನ್ನ ಸ್ನೇಹಿತನ ಜೊತೆಗೂಡಿ ದೇವಸ್ಥಾನದ ನಿರ್ವಹಣೆಗಾಗಿ ಹಣ ಸಂಗ್ರಹಿಸುವ ಜವಾಬ್ದಾರಿಯನ್ನು ಹೊತ್ತುಕೊಳ್ಳುತ್ತಾರೆ. ಪ್ರತಿದಿನ ತಮ್ಮ ಶಾಲೆ ಬಿಟ್ಟ ತಕ್ಷಣ ಮನೆ ಮನೆಗಳಿಗೆ ತೆರಳಿ ಗುರೂಜಿಯವರು ದೇವಸ್ಥಾನಕ್ಕಾಗಿ ಹಣ ಸಂಗ್ರಹಣೆ ಮಾಡಲು ಶುರು ಮಾಡುತ್ತಾರೆ. ಗುರೂಜಿಯವರ ಈ ಕಾರ್ಯ ದೇವಾಲಯದ ಧನಸಹಾಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಹಾಯ ಮಾಡುತ್ತದೆ. ಗುರೂಜಿಯವರು ಚಿಕ್ಕ ವಯಸ್ಸಿನಲ್ಲಿದ್ದಾಗಲೇ ಎಂತಹ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದರು ಎಂಬುದು ಈ ಘಟನೆಯಿಂದ ನಮಗೆ ತಿಳಿದು ಬರುತ್ತದೆ.
ರಾಷ್ಟ್ರಕ್ಕಾಗಿ ತಮ್ಮ ಜೀವನವನ್ನು ಅರ್ಪಿಸುವ ಹುರುಪು ಮತ್ತು ಉತ್ಸಾಹದಿಂದ ಮಾನವ ಗುರೂಜಿಯವರು ರಾಷ್ಟ್ರ ಸೇವೆಗಾಗಿ ಯಾವ ಮಾರ್ಗವನ್ನು ಅನುಸರಿಸಬೇಕು ಎಂಬ ಗೊಂದಲದಲ್ಲಿರುತ್ತಾರೆ. ಇದೇ ಸಮಯದಲ್ಲಿ ಗುರೂಜಿಯವರು ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಪೂರೈಸಿದಾಗ ಯೋಧನಾಗಿ ದೇಶ ಕಾಯಬೇಕು ಎಂದು ತಿರ್ಮಾನಕ್ಕೆ ಬಂದು, ಭಾರತೀಯ ಸೇನೆಯ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಾರೆ. ಆದರೆ ದೈಹಿಕ ಪರೀಕ್ಷೆಯ ಸಮಯದಲ್ಲಿ ಇವರನ್ನು ತಿರಸ್ಕರಿಸಿದಾಗ ಗುರೂಜಿಯವರು ಹಿನ್ನಡೆಯನ್ನು ಅನುಭವಿಸುವಂತಾಗುತ್ತದೆ. ಗುರೂಜಿಯವರ ದೇಹದ ತೂಕ ಕಡಿಮೆ ಇದೆ ಎಂಬ ಕಾರಣಕ್ಕೆ ಅವರನ್ನು ಮಿಲಿಟರಿ ಆಯ್ಕೆ ಪ್ರಕ್ರಿಯೆಯಿಂದ ತಿರಸ್ಕರಿಸಲಾಗುತ್ತದೆ. ಆ ಸಂದರ್ಭದಲ್ಲಿ ಗುರೂಜಿಯವರು ತಮ್ಮ ಅಸಮಾಧಾನವನ್ನು ಈ ರೀತಿಯಾಗಿ ಹೊರಹಾಕುತ್ತಾರೆ, “ರಾಷ್ಟ್ರಕ್ಕಾಗಿ ನಾನು ನನ್ನ ಜೀವನವನ್ನು ಅರ್ಪಿಸಲು ಇಷ್ಟೊಂದು ಉತ್ಸುಕನಾಗಿರುವಾಗ, ನನ್ನನ್ನು ಏಕೆ ತಿರಸ್ಕರಿಸಲಾಯಿತು?” ಈ ಘಟನೆಯಿಂದಾಗಿ ಅವರಿಗೆ ತುಂಬಾ ಆಶ್ಚರ್ಯವಾಗಿರುತ್ತದೆ.
ಈ ತಿರಸ್ಕಾರದಿಂದ ಗುರೂಜಿಯವರು ಎದೆಗುಂದಲಿಲ್ಲ. ತಮ್ಮ ಕನಸುಗಳಿಂದ ಎಂದಿಗೂ ಕೂಡ ವಿಮುಖರಾಗಲಿಲ್ಲ. ದೃಢನಿಶ್ಚಯ ಮತ್ತು ಸಮರ್ಪಣಾ ಮನೋಭಾವದಿಂದ ಗುರೂಜಿಯವರು ತಮ್ಮ ಮುಂದಿನ ಪಯಣವನ್ನು ಆರಂಭಿಸುತ್ತಾರೆ. ತಮ್ಮ ಶಿಕ್ಷಣವನ್ನು ಮುಂದುವರೆಸಿದ ಗುರೂಜಿಯವರು ಕರ್ನಾಟಕದ ಬಾಗಲಕೋಟೆಯಲ್ಲಿ ಸಿವಿಲ್ ಇಂಜಿನಿಯರಿಂಗ್ ಸ್ನಾತಕೋತ್ತರ ಪದವಿಯನ್ನು ಪೂರೈಸುತ್ತಾರೆ. ಗುರೂಜಿಯವರು ಯಾವಾಗಲೂ ತಮ್ಮ ಶಿಕ್ಷಕರ ಬಗ್ಗೆ ಮತ್ತು ಶೈಕ್ಷಣಿಕ ಜೀವನದುದ್ದಕ್ಕೂ ಮಾರ್ಗದರ್ಶನ ನೀಡಿದ ಪ್ರತಿಯೊಬ್ಬರಿಗೂ ಅಪಾರವಾದ ಕೃತಜ್ಞತಾ ಮನೋಭಾವವನ್ನು ಹೊಂದಿದ್ದರು, ಈಗಲೂ ಕೂಡ ಅದೇ ಮನೋಭಾವವನ್ನು ಗುರೂಜಿಯವರು ಮುಂದುವರೆಸಿಕೊಂಡು ಬಂದಿದ್ದಾರೆ.